Search This Blog

Monday 4 October 2021

ತುಳು ಎನ್ನುವುದು ಕೇವಲ ಭಾಷೆಯಲ್ಲ, ಸಂಸ್ಕೃತಿ

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಐಲೇಸಾ ತಂಡದ ಸಹಯೋಗದೊಂದಿಗೆ ಆನ್ ಲೈನ್ ಮೂಲಕ ತುಳುದಿನ ಹಾಗೂ ಗಾಂಧಿ ಜಯಂತಿ ಆಚರಿಸಿದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಮಹತ್ ಯೋಜನೆಯಾದ 'ಪರಿಷ್ಕ್ರತ ತುಳು ಜ್ಞಾತಿಪದಸಂಚಯದ ಡಿಜಿಟಲ್ ಆವೃತ್ತಿ’ಯನ್ನು ಸಹಕುಲಾಧಿಪತಿಯವರಾದ ಪ್ರೊ.ಡಾ. ಶಾಂತಾರಾಮ ಶೆಟ್ಟಿಯವರು ಲೋಕಾರ್ಪಣೆ ಮಾಡಿ - ತುಳು ಕೇವಲ ಭಾಷೆಯಲ್ಲ, ಸಂಸ್ಕೃತಿ. ಅದರ ಬೆಳವಣಿಗೆಗೆ ನಿಟ್ಟೆ ವಿಶ್ವವಿದ್ಯಾನಿಲಯ ಸದಾ ಬದ್ಧವಾಗಿದೆ- ಎಂದರು. ಆನ್ ಲೈನ್ ಮೂಲಕ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿಯವರಾದ ಪ್ರೊ.ಡಾ. ಸತೀಶ್ ಕುಮಾರ್ ಭಂಡಾರಿಯವರು ನಿಟ್ಟೆ ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಕಾರ್ಯಗಳನ್ನು ವಿವರಿಸುತ್ತಾ ಕೊರಗ ಭಾಷೆಯ ಯೋಜನೆ ಐಲೇಸಾದ ಸಹಯೋಗದಿಂದ ನಡೆಯಲಿದೆ ಎಂದು ವಿವರಿಸಿದರು. ಕುಲಸಚಿವರಾದ ಡಾ. ಅಲ್ಕಾ ಕುಲಕರ್ಣಿ, ನಿಕಟಪೂರ್ವ ಕುಲಪತಿಗಳಾದ ಪ್ರೊ.ಡಾ. ರಮಾನಂದ ಶೆಟ್ಟಿಯವರು ಉಪಸ್ಥಿತರಿದ್ದರು.

ಐಲೇಸಾ ತಂಡದ ಸಂಯೋಜಕರಾದ ಗಾಯಕ ಶ್ರೀ ರಮೇಶ್ ಚಂದ್ರ ಐಲೇಸಾದ ಕಾರ್ಯಕ್ರಮಗಳನ್ನು ಪರಿಚಯಿಸಿದರು.

ಮಣಿಪಾಲ ವಿಶ್ವವಿದ್ಯಾನಿಲಯದ ಅಂಗಸಂಸ್ಥೆ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್ ಆರ್ಟ್ಸ್ ನ ನಿರ್ದೇಶಕರಾದ ಪ್ರೊ. ವರದೇಶ ಹಿರೇಗಂಗೆಯವರು ಗಾಂಧಿಸ್ಮರಣೆಯನ್ನು ನಡೆಸಿಕೊಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರಾದ ಪ್ರೊ. ಡಾ. ಪಿ.ಎಸ. ಯಡಪಡಿತ್ತಾಯರು ತುಳು ಪ್ರೀತಿಯನ್ನು, ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ತುಳು ಕೆಲಸಗಳನ್ನು ಕುರಿತು ಹೇಳಿದರು. ಆಲ್ ಅಮೆರಿಕಾ ತುಳು ಅಸೋಸಿಯೇಷನ್ ನ ಅಧ್ಯಕ್ಷರಾದ ಶ್ರೀ ಭಾಸ್ಕರ ಶೇರಿಗಾರ್ ಮಾಳ,  ಅಮೆರಿಕಾದಲ್ಲಿ ತುಳುಕೂಟಗಳ ಕುರಿತು ವಿವರಿಸಿ, ಶುಭ ಹಾರೈಸಿದರು.

ಇದರ ಬಳಿಕ ಐಲೇಸಾ - ದ ವಾಯ್ಸ್ ಆಫ್ ಓಷನ್ ತಂಡದಿಂದ “ಐಲೇಸಾ ನಮನ ಗಾನ” - ಗಾಯಕರಾದ ರಮೇಶ್ಚಂದ್ರ, ಡಾ. ಸುಶೀಲಾ ರಾವ್ ಹಾಗೂ ಸುಧಾಕರ ಶೆಟ್ಟಿಯವರ ಸುಮಧುರ ಸ್ವರಗಳಲ್ಲಿ ಸೊಗಸಾದ ತುಳು, ಕನ್ನಡ, ಹಿಂದಿ ಗೀತೆಗಳ ಪ್ರಸ್ತುತಿಯಿತ್ತು.

ಸಂಪಾದಕರಾದ ಡಾ. ಪದ್ಮನಾಭ ಕೇಕುಣ್ಣಾಯರು ಸ್ವಾಗತಿಸಿದರು. ಡಾ. ಸಾಯಿಗೀತಾ ಕಾರ್ಯಕ್ರಮನಿರ್ವಹಣೆ ಮಾಡಿದರು. ಟೆಕ್ನಿಕಲ್ ಲೀಡ್ ಪ್ರದ್ಯೋತ್ ಹೆಗ್ಡೆ ತುಳು ಜ್ಞಾತಿಪದಸಂಚಯದ ಡಿಜಿಟಲ್ ಆವೃತ್ತಿಯನ್ನು ಪರಿಚಯಿಸಿದರು. ಐಲೇಸಾದ ಸಂಯೋಜಕರಾದ ಶ್ರೀ ಶಾಂತಾರಾಮ ಶೆಟ್ಟಿಯವರು ವಂದನಾರ್ಪಣೆ ಮಾಡಿದರು.

ಈ ಕಾರ್ಯಕ್ರಮವು ನಿಟ್ಟೆ ಯೂಟ್ಯೂಬ್ https://tinyurl.com/nittetube ನಲ್ಲಿ ವೀಕ್ಷಣೆಗೆ ಲಭ್ಯವಿದೆ. https://tulu-congnate-dictionary.web.app/main.html ಮೂಲಕ ತುಳುಜ್ಞಾತಿಪದಸಂಚಯದ ಡಿಜಿಟಲ್ ಆವೃತ್ತಿಯನ್ನು ಬಳಸಬಹುದೆಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.





Press release 



No comments:

Post a Comment

Note: only a member of this blog may post a comment.