Search This Blog

Wednesday, 4 December 2019

ವಿಶೇಷ ಚೇತನ ಮಕ್ಕಳ ಪೋಷಕರಿಗೆ ಕೌನ್ಸಿಲಿಂಗ್


ಕ್ಷೇಮಾದಲ್ಲಿ ಅಂತರಾಷ್ಟ್ರೀಯ ವಿಶೇಷ ಚೇತನ ಮಕ್ಕಳ ದಿನಾಚರಣೆಯಲ್ಲಿ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ
ವಿಕ ಸುದ್ದಿಲೋಕ ಉಳ್ಳಾಲ  ದೇರಳಕಟ್ಟೆಯ ನಿಟ್ಟೆ ವಿವಿ ವಿಶೇಷಚೇತನ ಮಕ್ಕಳ ಕುರಿತಾಗಿ  ಕೇವಲ ಒಂದು ದಿನಕ್ಕೆ ಕಾರ್ಯಕ್ರಮ ಸೀಮಿತಗೊಳಿಸದೆ ವರ್ಷವಿಡೀ ವಿಶೇಷ ಚೇತನ ಮಕ್ಕಳ ಸೇವೆ ಮಾಡುತ್ತಿದೆ. ಮುಂದಿನ‌ ದಿನಗಳಲ್ಲಿ ‌ಮಕ್ಕಳ ಪೋಷಕರಿಗೆ ಕೌನ್ಸಿಲಿಂಗ್ ನಡೆಸುವ ಯೋಜನೆ ಇದೆ ಎಂದು ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು. 

 ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಕಚೇರಿ ಮತ್ತು ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ನಿಟ್ಟೆ ಪರಿಗಣಿಸಲ್ಪಟ್ಟ ವಿವಿ ಅಂಗಸಂಸ್ಥೆ ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು  ಸಹಯೋಗದಲ್ಲಿ ಮಂಗಳವಾರ ದೇರಳಕಟ್ಟೆ  ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಕ್ಷೇಮಾ ಸಭಾಂಗಣದಲ್ಲಿ ನಡೆದ ವಿಶ್ವ ವಿಶೇಷ ಚೇತನ ಮಕ್ಕಳ ದಿನಾಚರಣೆ 'ಆಸರೆ-2019' ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 ವಿಶೇಷಚೇತನ ಮಕ್ಕಳಿಗೆ ಪರಿಕರಗಳನ್ನು ಕೊಡುವ ಜೊತೆ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ವಿಶೇಷ ಚೇತನ ಮಕ್ಕಳನ್ನು ಪೋಷಿಸುವ ಮೂಲಕ ಪೋಷಕರು ದೇವರ ಸೇವೆ ಮಾಡುತ್ತಿದ್ದಾರೆ. ಇವರಿಗೆ ಇನ್ನಷ್ಟು ಶಕ್ತಿ ತುಂಬುವ‌ ಕೆಲಸ ನಡೆಯಬೇಕಿದೆ ಎಂದು ಹೇಳಿದರು. ‌

 ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ಅಂಗವೈಕಲ್ಯ ಮಕ್ಕಳಿರುವಲ್ಲಿ ದೇವನ‌ ದಯೆ ಇರುವುದರಿಂದ ಆ ಪ್ರದೇಶದಲ್ಲಿ ಅನಾಹುತಗಳು ಕಡಿಮೆ, ಧಾರ್ಮಿಕ ಕೇಂದ್ರಗಳಲ್ಲಿ ಕೆಲಸ ಮಾಡುವುದಕ್ಕಿಂತಲೂ ವಿಶೇಷ ಚೇತನ ಮಕ್ಕಳ ಸೇವೆ ಮಾಡುವುದು ಶ್ರೇಷ್ಠ.‌ ಅಂಗವೈಕಲ್ಯ ಶಾಪವಲ್ಲ, ವರದಾನ. ಪೋಷಕರು ಪ್ರೋತ್ಸಾಹ ನೀಡಿದರೆ ಸಾಧನೆ ಕಷ್ಟವಲ್ಲ ಎಂದರು.‌

ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ, ದೇಹದ ಎಲ್ಲ ಅಂಗಾಂಗಳು ಸರಿಯಾಗಿದ್ದರೂ ಸಮಾಜದಲ್ಲಿ ವಿಕಲಚೇತನರಾಗಿ ಬಾಳುತ್ತಿರುವವರ ಮಧ್ಯೆ ವಿಕಲಚೇತನರು ಛಲದಿಂದ ಮುನ್ನಡೆದರೆ  ಭವಿಷ್ಯ ಉಜ್ವಲವಾಗುವುದರಲ್ಲಿ ಸಂಶಯ ಬೇಡ, ಪೋಷಕರು ಅಂಜದೆ ಧೈರ್ಯ ತುಂಬುವುದು ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಂಗಳಜ್ಯೋತಿ ಸಮಗ್ರ ಶಾಲೆಯ ಸಂಗೀತ ಶಿಕ್ಷಕಿ ಕಸ್ತೂರಿ ಅವರನ್ನು ಸನ್ಮಾನಿಸಲಾಯಿತು.
  ‌ಕಾರ್ಯಕ್ರಮದಲ್ಲಿ 12 ವಿಶೇಷ ವೇತನ ಮಕ್ಕಳಿಗೆ ಬೆಡ್, ಗಾಲಿಕುರ್ಚಿ, ವಾಕಿಂಗ್ ಸ್ಟಿಕ್ ವಿತರಿಸಲಾಯಿತು.  
 ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ‌ ಎಸ್.ಆರ್.ಲೋಕೇಶ್, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಡಾ. ಪ್ರಶಾಂತ್ ಕುಮಾರ್ ಕೆ.ಎಸ್., ಕ್ಷೇಮ ಡೀನ್ ಡಾ.ಪಿ.ಎಸ್. ಪ್ರಕಾಶ್, ವೈಸ್ ಡೀನ್  ಡಾ. ಅಮೃತ್ ಮಿರಾಜ್ಕರ್,  ಕ್ಷೇಮ ವೈದ್ಯಕೀಯ ಅಧೀಕ್ಷಕ‌  ಮೇಜರ್ ಡಾ.  ಶಿವಕುಮಾರ್ ಹಿರೇಮಠ್,  ಎಂಸಿಎಫ್ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್ ರಾವ್, ಕೃತಕ ಕಾಲು ಹೊಂದಿ‌ರುವ ಎಸ್ಸೆಸ್ಸೆಎಲ್ಸಿ ವಿದ್ಯಾರ್ಥಿನಿ ಪೂಜಾ ಹಾವೇರಿ ಉಪಸ್ಥಿತರಿದ್ದರು.

 ‌ಎ.ಬಿ. ಶೆಟ್ಟಿ ಸ್ಮಾರಕ  ದಂತ ವೈದ್ಯಕೀಯ ಕಾಲೇಜಿನ‌ ಡೀನ್ ಡಾ.ಯು.ಎಸ್. ಕೃಷ್ಣ ನಾಯಕ್ ಸ್ವಾಗತಿಸಿದರು. ‌ವಿಶೇಷ ಮಕ್ಕಳ ದಿನಾಚರಣೆ ಕಾರ್ಯಕ್ರಮ ಸಂಘಟಕಿ ಡಾ. ಅಮರಶ್ರೀ ಶೆಟ್ಟಿ ವರದಿ ವಾಚಿಸಿದರು. ಮಕ್ಕಳ‌ಚಿಕಿತ್ಸಾ ವಿಭಾಗದ ಡಾ. ಅಮಿತಾ ಹೆಗ್ಡೆ‌ ಸನ್ಮಾನ ಪತ್ರ ವಾಚಿಸಿದರು. 

ಸರ್ವ ಶಿಕ್ಷಣ ಅಭಿಯಾನದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕಿಶೋರಿ ಕಾರ್ಯಕ್ರಮ ನಿರೂಪಿಸಿದರು. 





'ಕಾಲಿಗೆ ಶಸ್ತ್ರಚಿಕಿತ್ಸೆ ಆದಾಗ ಮುಂದಕ್ಕೆ ಶಾಲೆಗೆ ಹೋಗುತ್ತೇನೆ, ಇಲ್ಲವೋ ಎಂದು ಅಂದುಕೊಂಡು ಅಳುತ್ತಾ ಕೂತಿದ್ದೆ, ಕಾಲಿಲ್ಲದಿದ್ದರೆ ಏನು, ಬುದ್ಧಿ ಇದೆಯಲ್ಲಾ, ನಾನು ಕಲಿತು ಮನೆಯವರನ್ನು ಸಾಕುತ್ತೇನೆ ಎನ್ನುವ ನಿರ್ಧಾರಕ್ಕೆ ಬಂದಾಗ ಮನೆಯವರು ಹಾಗೂ ನಿಟ್ಟೆ ವಿವಿಯ ವೈದ್ಯರು ಸಹಕಾರ ನೀಡಿ‌ ಕೃತಕ ಕಾಲು ಜೋಡಿಸಿ ಹೊಸ ಬದುಕು ನೀಡಿದರು.
ಪೂಜಾ ಹಾವೇರಿ, 

No comments:

Post a Comment

Note: only a member of this blog may post a comment.